ಹುಲಿ ವೇಷ (ಹುಲಿ ಕುಣಿತ)

ಹುಲಿ ವೇಷ (ಹುಲಿ ಕುಣಿತ)

ಹುಲಿ ಕುಣಿತ ಎಂದೂ ಕರೆಯಲಾಗುವ ಹುಲಿ ವೇಷ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ನವರಾತ್ರಿಯಂತಹ ಹಬ್ಬಗಳಲ್ಲಿ ಪ್ರದರ್ಶಿಸಲಾಗುವ ಸಾಂಪ್ರದಾಯಿಕ ಮತ್ತು ಉತ್ಸಾಹಭರಿತ ನೃತ್ಯ ಪ್ರಕಾರ. ಗಾಂಭೀರ್ಯದ ಬೇಟೆಗಾರ ಪ್ರಾಣಿಯಾದ ಹುಲಿಯನ್ನು ಗೌರವಿಸುತ್ತಾ ಕಲಾವಿದರು ಮೈಗೆ ಹುಲಿಯಂತೆ ಬಣ್ಣ ಬಳಿದುಕೊಂಡು, ಸಂಭ್ರಮದ ಮೆರವಣಿಗೆಗಳಲ್ಲಿ ತಾಸೆಯ ಬಡಿತಕ್ಕೆ ಕುಣಿಯುತ್ತಾರೆ. ಅಂತರರಾಷ್ಟ್ರೀಯ ಮನ್ನಣೆ ಪಡೆದ ಈ ಕುಣಿತ, ಈ ಪ್ರದೇಶದಲ್ಲಿ ಶಕ್ತಿ ಮತ್ತು ದೈವತ್ವದ ಸಂಕೇತವಾದ ಹುಲಿಯ ಬಗೆಗಿನ ಆಳವಾದ ಗೌರವ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಹುಲಿ ವೇಷ (ಹುಲಿ ಕುಣಿತ) ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಮತ್ತು ಗಣೇಶ ಚತುರ್ಥಿಯಂತಹ ಪ್ರಮುಖ ಹಬ್ಬಗಳಲ್ಲಿ ಆಚರಣೆಯಲ್ಲಿರುವ ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಚೈತನ್ಯಪೂರ್ಣ ಪರಂಪರೆ. ಇದೊಂದು ಪ್ರದರ್ಶನ ಕಲೆಯಾಗಿದ್ದು, ಇದರಲ್ಲಿ ಪುರುಷರು ಹುಲಿಯನ್ನು ಹೋಲುವಂತೆ ವೇಷ ತೊಟ್ಟು ಮೈಗೆ ಬಣ್ಣ ಹಚ್ಚಿಕೊಂಡು, ಈ ಪ್ರದೇಶದ ಜನರು ಪವಿತ್ರವೆಂದು ಪರಿಗಣಿಸುವ ಈ ಶಕ್ತಿಶಾಲಿ ಪ್ರಾಣಿಯ ಮೇಲಿನ ಪ್ರೀತಿ ಮತ್ತು ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ.

"ಪಿಲಿವೇಷ" ತಂಡಗಳೆಂದು ಕರೆಯಲಾಗುವ ಕಲಾವಿದರು ಈ ಹಬ್ಬಗಳ ಮೆರವಣಿಗೆಗಳಲ್ಲಿ ಪಾಲ್ಗೊಂಡು ತಮ್ಮ ಉತ್ಸಾಹಭರಿತ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಹುಲಿಯ ವಿನ್ಯಾಸದ ಮೈಬಣ್ಣ ಮತ್ತು ತಾಸೆಯ ಲಯಬದ್ಧ ಬಡಿತದೊಂದಿಗೆ ನಡೆಯುವ ನಾಟಕೀಯ ಕುಣಿತ, ಹುಲಿಯೇ ಕುಣಿಯುತ್ತಿದೆಯೇನೋ ಎಂಬ ಮೋಹಕ ಭ್ರಮೆ ಮೂಡಿಸುತ್ತದೆ.

ಹಬ್ಬದ ಪ್ರಮುಖ ವಿಶೇಷತೆಗಳು:

  • ಹುಲಿ ಬಣ್ಣ ಮತ್ತು ವೇಷಭೂಷಣ: ಕಲಾವಿದರು ಮೈ ಮತ್ತು ಮುಖಕ್ಕೆ ಹುಲಿ, ಚಿರತೆ ಅಥವಾ ಚೀತಾವನ್ನು ಹೋಲುವ ವಿನ್ಯಾಸಗಳ ಬಣ್ಣ ಬಳಿದುಕೊಳ್ಳುತ್ತಾರೆ. ವೇಷವನ್ನು ಪೂರ್ಣಗೊಳಿಸಲು ಕೃತಕ ತುಪ್ಪಳದ ಮುಖವಾಡ ಮತ್ತು ಕೆಲವೊಮ್ಮೆ ಬಾಲವನ್ನೂ ಧರಿಸುತ್ತಾರೆ. ಬಣ್ಣದಿಂದ ಮೈ ಉರಿಯುತ್ತದೆಯಾದರೂ, ಹಬ್ಬದ ಭಾಗವಾಗಿ ಕಲಾವಿದರು ಅದನ್ನು ಸಹಿಸಿಕೊಳ್ಳುತ್ತಾರೆ.
  • ಆಚರಣೆಗಳು ಮತ್ತು ಸ್ಪರ್ಧೆಗಳು: ಈ ನೃತ್ಯ ಪ್ರಕಾರ ಪರಂಪರೆಯಲ್ಲಿ ಬೇರೂರಿದ್ದು, ಹೆಚ್ಚಾಗಿ ಹರಕೆಯ ಭಾಗವಾಗಿ ಪ್ರದರ್ಶಿಸಲಾಗುತ್ತದೆ. ಕೆಲವೆಡೆ ಹಬ್ಬದ ವೇಳೆ ಪಿಲಿವೇಷ ತಂಡಗಳ ನಡುವೆ ಸ್ಪರ್ಧೆಗಳೂ ನಡೆಯುತ್ತವೆ; ಇವು ಕೌಶಲ, ಕಲಾತ್ಮಕತೆ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತವೆ.
  • ಹಬ್ಬದ ಮೆರವಣಿಗೆಗಳು: ಕೃಷ್ಣ ಜನ್ಮಾಷ್ಟಮಿ ಮತ್ತು ನವರಾತ್ರಿ ಆಚರಣೆಗಳ ವರ್ಣರಂಜಿತ ಮೆರವಣಿಗೆಗಳ ಭಾಗವಾಗಿ ಈ ಕುಣಿತ ನಡೆಯುತ್ತದೆ; ಇದು ಹಬ್ಬಕ್ಕೆ ಚೈತನ್ಯ ಮತ್ತು ರೋಮಾಂಚನ ತುಂಬುತ್ತದೆ.

ಸಾಂಸ್ಕೃತಿಕ ಮಹತ್ವ:
ಹುಲಿ ವೇಷ, ದೈವಿಕ ಶಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುವ ಹುಲಿಯ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರಿಗಿರುವ ಆಳವಾದ ಗೌರವ ಮತ್ತು ಭಕ್ತಿಯ ಅಭಿವ್ಯಕ್ತಿ. ತಾಸೆಯ ಬಡಿತಕ್ಕೆ ನಡೆಯುವ ಈ ಕುಣಿತ ಅಪಾರ ಜನಸಮೂಹವನ್ನು ಸೆಳೆಯುವ ಮೋಹಕ ದೃಶ್ಯವೈಭವವಾಗಿದ್ದು, ಈ ಪ್ರದೇಶದ ಹಬ್ಬದ ಪರಂಪರೆಯ ಅವಿಭಾಜ್ಯ ಅಂಗವಾಗಿದೆ.

ಏಕೆ ಭಾಗವಹಿಸಬೇಕು?
ಕಲೆ, ಭಕ್ತಿ ಮತ್ತು ದೈಹಿಕ ಸಹಿಷ್ಣುತೆಯನ್ನು ಮೇಳೈಸುವ ವರ್ಣರಂಜಿತ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದರ್ಶನವಾದ ಹುಲಿ ವೇಷ ಪ್ರವಾಸಿಗರಿಗೆ ಮರೆಯಲಾಗದ ಅನುಭವ. ಅಂತರರಾಷ್ಟ್ರೀಯ ಮನ್ನಣೆಯ ಈ ನೃತ್ಯ ಪ್ರಕಾರವನ್ನು ಅದರ ತವರಿನಲ್ಲೇ ವೀಕ್ಷಿಸುವುದು ಸ್ಥಳೀಯ ಪರಂಪರೆಯೊಂದಿಗೆ ಬೆರೆಯಲು ಮತ್ತು ಕೃಷ್ಣ ಜನ್ಮಾಷ್ಟಮಿ ಹಾಗೂ ನವರಾತ್ರಿಯ ಹಬ್ಬದ ವಾತಾವರಣದಲ್ಲಿ ತಲ್ಲೀನರಾಗಲು ಅವಕಾಶ ನೀಡುತ್ತದೆ.