ಕೋಡಿ ಹಬ್ಬ, ಉಡುಪಿ

ಕೋಡಿ ಹಬ್ಬ, ಉಡುಪಿ

ಉಡುಪಿಯ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕೋಡಿ ಹಬ್ಬ ಪ್ರತಿವರ್ಷ ಉತ್ಸಾಹದಿಂದ ಆಚರಿಸಲಾಗುವ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಉತ್ಸವ. ಈ ಹಬ್ಬದಲ್ಲಿ ಬಿದಿರಿನ ರಥೋತ್ಸವ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಪೌರಾಣಿಕ ಮಹತ್ವದ ವಿಧಿಗಳು ನಡೆಯಲಿವೆ. ದೀಪಾಲಂಕಾರದಿಂದ ಕಂಗೊಳಿಸುವ ಊರು ಭಕ್ತರು ಮತ್ತು ಪ್ರವಾಸಿಗರ ಸಂಭ್ರಮದ ಕೇಂದ್ರವಾಗುತ್ತದೆ.

ಉಡುಪಿಯ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಕೋಡಿ ಹಬ್ಬ ಪುರಾಣ, ಭಕ್ತಿ ಮತ್ತು ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮೇಳೈಸುವ ಅಪರೂಪದ ಉತ್ಸವ. ಈ ವಿಶಿಷ್ಟ ಹಬ್ಬ ಸಾವಿರಾರು ಜನರನ್ನು ಕೋಟೇಶ್ವರಕ್ಕೆ ಸೆಳೆಯಲಿದ್ದು, ಅಲ್ಲಿ ಅವರು ಅಸಾಧಾರಣ ಬಿದಿರಿನ ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬದ ದೀಪಾಲಂಕಾರದಿಂದ ಝಗಮಗಿಸುವ ಊರನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಕೋಟಿಲಿಂಗೇಶ್ವರ ದೇವಸ್ಥಾನದ ಬಗ್ಗೆ:
ಕೋಟಿಲಿಂಗೇಶ್ವರ ದೇವಸ್ಥಾನ ಈ ಪ್ರದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದು. ಹಿಂದೆ ಧ್ವಜಪುರ ಎಂದು ಕರೆಯಲಾಗುತ್ತಿದ್ದ ಕೋಟೇಶ್ವರದಲ್ಲಿರುವ ಈ ದೇವಾಲಯ ತನ್ನ ಸುಂದರ ಪರಿಸರ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರಾಗಿದೆ. ಕರ್ನಾಟಕದ ಅತಿ ದೊಡ್ಡ ಪುಷ್ಕರಿಣಿಯಾದ ಕೋಟಿ ತೀರ್ಥವೂ ಇಲ್ಲಿದೆ.

ಪೌರಾಣಿಕ ಮಹತ್ವ:
ಈ ಹಬ್ಬದ ಮೂಲ ಪುರಾಣಗಳಲ್ಲಿನ ಒಂದು ಕಥೆಯಲ್ಲಿದೆ. ಸಂತಾನಹೀನತೆಯಿಂದ ಬಳಲುತ್ತಿದ್ದ ಬಸ್ರೂರಿನ ಮಹಾರಾಜ ವಸು ಚಕ್ರವರ್ತಿ, ಸಂತಾನ ಪ್ರಾಪ್ತಿಯಾದರೆ ಕೋಟೇಶ್ವರದಲ್ಲಿ ದೇವಾಲಯ ಕಟ್ಟಿಸುವುದಾಗಿ ಹರಕೆ ಹೊತ್ತನು. ಸಂತಾನ ಭಾಗ್ಯ ದೊರೆತ ನಂತರ ರಾಜ ದೇವಾಲಯ ನಿರ್ಮಾಣ ಆರಂಭಿಸಿದನು. ಆದರೆ ಬ್ರಹ್ಮರಥ ಸಮಯಕ್ಕೆ ಸಿದ್ಧವಾಗದಿದ್ದಾಗ, ರಾಜ ಬಿದಿರು ಮತ್ತು ಕಬ್ಬಿನ ಸಿಪ್ಪೆಯಿಂದ ರಥವನ್ನು ನಿರ್ಮಿಸಿದನು. ಇದರಿಂದ ಹುಟ್ಟಿಕೊಂಡ ವಿಶಿಷ್ಟ ಬಿದಿರಿನ ರಥೋತ್ಸವ ಇಂದು ಕೋಡಿ ಹಬ್ಬದ ಹೆಗ್ಗುರುತಾಗಿದೆ.

ಹಬ್ಬದ ವಿಶೇಷತೆಗಳು:

  • ಬಿದಿರಿನ ರಥೋತ್ಸವ: ರಾಜನ ಹರಕೆಯನ್ನು ಸಂಕೇತಿಸುವ ಸಾಂಪ್ರದಾಯಿಕ ಬಿದಿರಿನ ರಥವನ್ನು ಬೀದಿಗಳಲ್ಲಿ ಎಳೆಯಲಾಗುತ್ತದೆ; ಇದು ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು ಜನಸಾಗರವನ್ನು ಸೆಳೆಯುತ್ತದೆ.
  • ಸಾಂಸ್ಕೃತಿಕ ಪ್ರದರ್ಶನಗಳು: ಸಂಗೀತ, ನೃತ್ಯ ಮತ್ತು ಸ್ಥಳೀಯ ಪ್ರದರ್ಶನಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ.
  • ಊರಿನ ಅಲಂಕಾರ: ಕೋಟೇಶ್ವರ ಊರು ದೀಪಾಲಂಕಾರದಿಂದ ಸುಂದರವಾಗಿ ಸಿಂಗರಿಸಲ್ಪಟ್ಟು ಮಾಂತ್ರಿಕ ವಾತಾವರಣ ಸೃಷ್ಟಿಸುತ್ತದೆ.
  • ಹಬ್ಬದ ವಾತಾವರಣ: ಹಗಲು-ರಾತ್ರಿ ನಡೆಯುವ ಸಂಭ್ರಮದಲ್ಲಿ ಜಾತ್ರೆ, ತಿಂಡಿ ಮಳಿಗೆಗಳು ಮತ್ತು ಪ್ರವಾಸಿಗರಿಗಾಗಿ ವಿವಿಧ ಚಟುವಟಿಕೆಗಳು ಇರುತ್ತವೆ.
  • ಸರ್ಕಸ್ ಆಟಗಳು: ಮೋಜಿನ ಸರ್ಕಸ್ ಆಟಗಳು ಎಲ್ಲಾ ವಯಸ್ಸಿನವರಿಗೂ ಮನರಂಜನೆ ಒದಗಿಸುತ್ತವೆ.

ಏಕೆ ಭಾಗವಹಿಸಬೇಕು?
ಕೋಡಿ ಹಬ್ಬ ಕೇವಲ ಆಧ್ಯಾತ್ಮಿಕ ಸಂದರ್ಭವಲ್ಲ, ಕರಾವಳಿ ಕರ್ನಾಟಕದ ವಿಶಿಷ್ಟ ಪರಂಪರೆಯ ದರ್ಶನ ಮಾಡಿಸುವ ವರ್ಣರಂಜಿತ ಸಾಂಸ್ಕೃತಿಕ ಉತ್ಸವವೂ ಹೌದು. ಬಿದಿರಿನ ರಥೋತ್ಸವದಿಂದ ಸಾಂಸ್ಕೃತಿಕ ಪ್ರದರ್ಶನ ಮತ್ತು ಹಬ್ಬದ ಚಟುವಟಿಕೆಗಳವರೆಗೆ, ಇದು ಮೋಜು, ನಂಬಿಕೆ ಮತ್ತು ಸಮುದಾಯ ಮನೋಭಾವವನ್ನು ಖಚಿತಪಡಿಸುವ ಉತ್ಸವ.

ಈ ಸಂಭ್ರಮದಲ್ಲಿ ಪಾಲ್ಗೊಂಡು ಕೋಡಿ ಹಬ್ಬದ ಮಾಂತ್ರಿಕತೆಯನ್ನು ಅನುಭವಿಸಿ!