ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ರಥೋತ್ಸವ

ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ರಥೋತ್ಸವ

ವಸಂತ ನವರಾತ್ರಿಯ ವೇಳೆ ನಡೆಯುವ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ರಥೋತ್ಸವ ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಮುಖ ಧಾರ್ಮಿಕ ಉತ್ಸವ. ವಿಶೇಷ ಪೂಜೆಗಳು, ಅಭಿಷೇಕ, ಹೋಮಗಳು ಮತ್ತು ಭವ್ಯ ರಥೋತ್ಸವ ಈ ಉತ್ಸವದ ವಿಶೇಷತೆ. ಆಧ್ಯಾತ್ಮಿಕ ಭಕ್ತಿ ಮತ್ತು ವರ್ಣರಂಜಿತ ಸಾಂಸ್ಕೃತಿಕ ಸಂಭ್ರಮಕ್ಕಾಗಿ ಭಕ್ತರು ಮತ್ತು ಪ್ರವಾಸಿಗರು ಇಲ್ಲಿ ಒಂದಾಗುತ್ತಾರೆ.

ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ರಥೋತ್ಸವ, ಕೊಡಚಾದ್ರಿ ಬೆಟ್ಟದ ಸುಂದರ ತಪ್ಪಲಿನಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ. ಸಾಮಾನ್ಯವಾಗಿ ವಸಂತ ನವರಾತ್ರಿಯ ಅವಧಿಯಲ್ಲಿ ನಡೆಯುವ ಈ ಮಹತ್ವದ ಉತ್ಸವ ದೇಶದೆಲ್ಲೆಡೆಯ ಭಕ್ತರನ್ನು ಆಕರ್ಷಿಸುತ್ತದೆ. ದೇವಸ್ಥಾನದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ಆರಾಧನೆಯ ಈ ಉತ್ಸವದಲ್ಲಿ ವಿವಿಧ ವಿಧಿಗಳು, ಪ್ರಾರ್ಥನೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

ಪ್ರಮುಖ ವಿಧಿಗಳು ಮತ್ತು ವಿಶೇಷತೆಗಳು:

  • ವಿಶೇಷ ಪೂಜೆಗಳು ಮತ್ತು ಅಭಿಷೇಕ: ದೇವಿಯ ಆಶೀರ್ವಾದ ಕೋರಿ ಭಕ್ತರು ಅಭಿಷೇಕ (ವಿಧಿವತ್ ಸ್ನಾನ) ಮತ್ತು ಹೋಮ (ಅಗ್ನಿ ವಿಧಿ) ಸೇರಿದಂತೆ ವಿಶೇಷ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ.
  • ರಥೋತ್ಸವ: ಉತ್ಸವದ ಪ್ರಮುಖ ಆಕರ್ಷಣೆ ಭವ್ಯ ರಥೋತ್ಸವ; ಇದರಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಉತ್ಸವಮೂರ್ತಿಯನ್ನು ಸುಂದರವಾಗಿ ಅಲಂಕರಿಸಿದ ರಥದಲ್ಲಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸಾವಿರಾರು ಯಾತ್ರಿಕರು ಮತ್ತು ಪ್ರವಾಸಿಗರನ್ನು ಸೆಳೆಯುವ ಈ ಮೆರವಣಿಗೆ ವರ್ಣರಂಜಿತ ಮತ್ತು ಕಣ್ಮನ ಸೆಳೆಯುವ ದೃಶ್ಯವೈಭವ.
  • ಸಾಂಸ್ಕೃತಿಕ ಪ್ರದರ್ಶನಗಳು: ಧಾರ್ಮಿಕ ವಿಧಿಗಳ ಜೊತೆಗೆ ಸ್ಥಳೀಯ ಸಾಂಸ್ಕೃತಿಕ ಪ್ರದರ್ಶನಗಳು, ಸಂಗೀತ, ನೃತ್ಯ ಮತ್ತು ಸಮುದಾಯದ ಸಂಭ್ರಮಾಚರಣೆಗಳು ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ.

ಶ್ರೀ ಮೂಕಾಂಬಿಕಾ ದೇವಸ್ಥಾನದ ಬಗ್ಗೆ:
ಶ್ರೀ ಮೂಕಾಂಬಿಕಾ ದೇವಿಗೆ ಸಮರ್ಪಿತವಾದ ಈ ದೇವಸ್ಥಾನ ಕರ್ನಾಟಕದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದು. ಎರಡು ಭಾಗಗಳಾಗಿ ವಿಭಜಿತವಾಗಿರುವ ವಿಶಿಷ್ಟ ಸ್ವಯಂಭೂ ಜ್ಯೋತಿರ್ಲಿಂಗಕ್ಕೆ ಈ ದೇವಾಲಯ ಹೆಸರಾಗಿದೆ: ಒಂದು ಭಾಗ ತ್ರಿದೇವಿಯರನ್ನು (ಮೂವರು ದೇವಿಯರು) ಮತ್ತು ಇನ್ನೊಂದು ಭಾಗ ತ್ರಿಮೂರ್ತಿಗಳನ್ನು (ಹಿಂದೂ ಧರ್ಮದ ಮೂವರು ಪ್ರಮುಖ ದೇವರುಗಳು) ಪ್ರತಿನಿಧಿಸುತ್ತದೆ. ದೇವಿಯ ಚತುರ್ಭುಜ ಪಂಚಲೋಹ ವಿಗ್ರಹವೂ ಇಲ್ಲಿದೆ.

ಈ ದೇವಾಲಯವನ್ನು ಪರಶುರಾಮ ಮಹರ್ಷಿಗಳು ಸೃಷ್ಟಿಸಿದರೆಂದು ನಂಬಲಾಗಿದ್ದು, ಇದು ಸೌಪರ್ಣಿಕಾ ನದಿಯ ದಡದಲ್ಲಿದೆ. ಮೂಕಾಂಬಿಕಾ ದೇವಿ ಮೂಕಾಸುರ (ಕೌಮಾಸುರ ಎಂದೂ ಕರೆಯಲ್ಪಡುವ) ರಾಕ್ಷಸನನ್ನು ಸಂಹರಿಸಿದಳೆಂದು ನಂಬಲಾಗಿದ್ದು, ಆಕೆಯ ಹೆಸರು ಆ ರಾಕ್ಷಸನ ಮೇಲಿನ ವಿಜಯವನ್ನು ಸೂಚಿಸುತ್ತದೆ.

ಏಕೆ ಭಾಗವಹಿಸಬೇಕು?
ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ರಥೋತ್ಸವ ಕರ್ನಾಟಕದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ವರ್ಣರಂಜಿತ ಸಾಂಸ್ಕೃತಿಕ ವೈಭವವನ್ನು ಅನುಭವಿಸುವ ಅವಕಾಶ. ಪ್ರಾಚೀನ ವಿಧಿಗಳು, ಭವ್ಯ ರಥೋತ್ಸವ ಮತ್ತು ಉತ್ಸಾಹಭರಿತ ಸಾಂಸ್ಕೃತಿಕ ಸಂಭ್ರಮದ ಸಂಗಮವಾದ ಈ ಉತ್ಸವ ಭಕ್ತಿ ಮತ್ತು ಮನರಂಜನೆ ಎರಡನ್ನೂ ಬಯಸುವವರಿಗೆ ತಲ್ಲೀನಗೊಳಿಸುವ ಅನುಭವ ನೀಡುತ್ತದೆ.

ಈ ಭವ್ಯ ಮತ್ತು ಪವಿತ್ರ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆಯಿರಿ!