ಉಡುಪಿ ಪರ್ಯಾಯ - ಶ್ರೀ ಕೃಷ್ಣ ಮಠ

ಉಡುಪಿ ಪರ್ಯಾಯ - ಶ್ರೀ ಕೃಷ್ಣ ಮಠ

ವರ್ಣರಂಜಿತ ಮತ್ತು ಆಧ್ಯಾತ್ಮಿಕ ಪರಂಪರೆಯಾದ ಉಡುಪಿ ಪರ್ಯಾಯ ಮಹೋತ್ಸವವನ್ನು ಕರ್ನಾಟಕದ ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅಷ್ಟ ಮಠಗಳ ನಡುವೆ ದೇವಾಲಯದ ಆಡಳಿತದ ವಿಧ್ಯುಕ್ತ ಹಸ್ತಾಂತರವನ್ನು ಈ ಉತ್ಸವ ಸೂಚಿಸುತ್ತದೆ. ಭಕ್ತರು ಭವ್ಯ ಮೆರವಣಿಗೆ, ಪವಿತ್ರ ವಿಧಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನುಭವಿಸಬಹುದು. ಎರಡು ದಿನಗಳ ಈ ಸಂಭ್ರಮದಲ್ಲಿ ವರ್ಣರಂಜಿತ ಅಲಂಕಾರ, ಮಾರಾಟ ಮೇಳಗಳು ಮತ್ತು ಆಹಾರ ಮೇಳಗಳಿಂದ ನಗರ ಕಳೆಗಟ್ಟುತ್ತದೆ.

ಉಡುಪಿ ಪರ್ಯಾಯ ಮಹೋತ್ಸವ ಕರ್ನಾಟಕದ ದೇವಾಲಯಗಳ ನಗರಿ ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುವ ಪರಂಪರೆಯಲ್ಲಿ ಮಿಂದ ಧಾರ್ಮಿಕ ಉತ್ಸವ. ಸುಪ್ರಸಿದ್ಧ ಶ್ರೀ ಕೃಷ್ಣ ದೇವಾಲಯದ ಆಡಳಿತವನ್ನು ಅಷ್ಟ ಮಠಗಳ ಯತಿಗಳ ನಡುವೆ ಹಸ್ತಾಂತರಿಸುವುದನ್ನು ಈ ಭವ್ಯ ಸಂದರ್ಭ ಸಂಕೇತಿಸುತ್ತದೆ.

ಪುತ್ತಿಗೆ, ಪಲಿಮಾರು, ಅದಮಾರು, ಶಿರೂರು, ಪೇಜಾವರ, ಸೋದೆ, ಕಾಣಿಯೂರು ಮತ್ತು ಕೃಷ್ಣಾಪುರ ಎಂಬ ಎಂಟು ಮಠಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ಸರದಿಯಂತೆ ದೇವಾಲಯದ ಆಡಳಿತ ನಡೆಸುತ್ತವೆ. ಪರ್ಯಾಯ ಪೀಠವೇರಲಿರುವ ಸ್ವಾಮೀಜಿಯವರು ಪವಿತ್ರ ಸ್ನಾನ ಮಾಡಿ, ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣ ದೇವಾಲಯಕ್ಕೆ ಆಗಮಿಸುವುದರೊಂದಿಗೆ ದಿನ ಆರಂಭವಾಗುತ್ತದೆ. ಭವ್ಯ ಸಾಂಸ್ಕೃತಿಕ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ ಮತ್ತು ಹಬ್ಬದ ವಾತಾವರಣ ಮೆರವಣಿಗೆಗೆ ಸಾಥ್ ನೀಡುತ್ತವೆ.

ದೇವಾಲಯದಲ್ಲಿ ನಿರ್ಗಮಿಸುವ ಸ್ವಾಮೀಜಿಯವರು ಅಂತಿಮ ವಿಧಿಗಳನ್ನು ನೆರವೇರಿಸಿ, ಸಾಂಕೇತಿಕವಾಗಿ ಗರ್ಭಗುಡಿಯ ಕೀಲಿಕೈ, ಅಕ್ಷಯ ಪಾತ್ರೆ ಮತ್ತು ಇತರ ಪವಿತ್ರ ವಸ್ತುಗಳನ್ನು ಮುಂದಿನ ಪೀಠಾಧಿಪತಿಗಳಿಗೆ ಹಸ್ತಾಂತರಿಸುತ್ತಾರೆ. ಹಸ್ತಾಂತರದ ನಂತರ ದರ್ಬಾರ್ ಮತ್ತು ಸಾರ್ವಜನಿಕ ಸಮಾರಂಭ ನಡೆಯುತ್ತದೆ; ಈ ಅಪರೂಪದ ಮತ್ತು ಮಹತ್ವದ ಕ್ಷಣಕ್ಕೆ ಭಕ್ತರು ಸಾಕ್ಷಿಯಾಗಬಹುದು.

ಉತ್ಸವದ ವಿಶೇಷತೆಗಳು:

  • ಸಾಂಪ್ರದಾಯಿಕ ಮೆರವಣಿಗೆಗಳು: ಪಲ್ಲಕ್ಕಿಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸಂಗೀತದಿಂದ ಕೂಡಿದ ವರ್ಣರಂಜಿತ ಮೆರವಣಿಗೆಗಳು.
  • ವಿಧ್ಯುಕ್ತ ಹಸ್ತಾಂತರ: ಅಷ್ಟ ಮಠಗಳ ನಡುವೆ ದೇವಾಲಯದ ಆಡಳಿತದ ಸಾಂಕೇತಿಕ ಹಸ್ತಾಂತರಕ್ಕೆ ಸಾಕ್ಷಿಯಾಗಿ.
  • ನಗರದ ಅಲಂಕಾರ: ದೀಪಾಲಂಕಾರ, ಹೂವಿನ ಅಲಂಕಾರ ಮತ್ತು ಹಬ್ಬದ ಉತ್ಸಾಹದಿಂದ ಉಡುಪಿ ಕಳೆಗಟ್ಟುತ್ತದೆ.
  • ಮಾರಾಟ ಮತ್ತು ಆಹಾರ ಮೇಳಗಳು: ಪ್ರವಾಸಿಗರು ಸ್ಥಳೀಯ ಕರಕುಶಲ ವಸ್ತುಗಳು, ಖಾದ್ಯಗಳು ಮತ್ತು ಮನರಂಜನೆಯನ್ನು ಸವಿಯಬಹುದು.

ಏಕೆ ಭಾಗವಹಿಸಬೇಕು?

ಉಡುಪಿ ಪರ್ಯಾಯ ಮಹೋತ್ಸವ ಕೇವಲ ಆಧ್ಯಾತ್ಮಿಕ ಉತ್ಸವವಲ್ಲ, ಪರಂಪರೆ, ಕಲೆ ಮತ್ತು ಸಮುದಾಯವನ್ನು ಒಗ್ಗೂಡಿಸುವ ಸಾಂಸ್ಕೃತಿಕ ಸಂಭ್ರಮವೂ ಹೌದು. ಭಾರತೀಯ ಪರಂಪರೆ ಮತ್ತು ಭಕ್ತಿಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ತಪ್ಪದೇ ಭೇಟಿ ನೀಡಬೇಕಾದ ಉತ್ಸವ ಇದು.

ಉಡುಪಿ ಪ್ರವಾಸ ಯೋಜಿಸಿ ಈ ಅಸಾಧಾರಣ ಸಂಭ್ರಮದ ಭಾಗವಾಗಿ!