ಮಲ್ಪೆ ಕಡಲತೀರ
ಮಲ್ಪೆ ಕಡಲತೀರವು ತನ್ನ ಮನಮೋಹಕ ಸುವರ್ಣ ಮಿಶ್ರಿತ ಕಂದು ಮರಳು ಹಾಗೂ ತಿಳಿನೀಲಿ-ಹಸಿರು ಕಡಲ ನೀರಿನ ಸೊಬಗಿಗೆ ಪ್ರಸಿದ್ಧವಾಗಿದೆ
ಉಡುಪಿಯ ಹೆಗ್ಗುರುತಾದ ಕಡಲತೀರದಲ್ಲಿ ಹೊಂಬಣ್ಣದ ಮರಳು ಹಾಗೂ ಸಾಹಸದ ಅನುಭೂತಿ ಪಡೆಯಿರಿ
ಉಡುಪಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿರುವ ಮಲ್ಪೆ ಕಡಲತೀರವು ನೈಸರ್ಗಿಕ ಸೌಂದರ್ಯ, ರೋಮಾಂಚಕ ಸಾಹಸ ಕ್ರೀಡೆಗಳು ಹಾಗೂ ಐತಿಹಾಸಿಕ ಮಹತ್ವದ ಸಂಗಮವಾಗಿರುವ ಪ್ರಶಾಂತ ಕರಾವಳಿ ತಾಣವಾಗಿದೆ. ತನ್ನ ನುಣುಪಾದ ಹೊಂಬಣ್ಣದ ಮರಳು ಮತ್ತು ಅರಬ್ಬಿ ಸಮುದ್ರದ ಸೌಮ್ಯ ಅಲೆಗಳಿಗೆ ಹೆಸರುವಾಸಿಯಾಗಿರುವ ಈ ಕಡಲತೀರವು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿರಾಳವಾಗಿ ಕಾಲ ಕಳೆಯಲು ಪ್ರಶಸ್ತವಾದ ತಾಣವಾಗಿದೆ.
ಮಲ್ಪೆ ಕಡಲತೀರವು ಸಾಹಸ ಕ್ರೀಡೆಗಳ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ಪ್ಯಾರಾಗ್ಲೈಡಿಂಗ್, ಜೆಟ್ ಸ್ಕೀಯಿಂಗ್, ಬನಾನಾ ಬೋಟ್ ರೈಡ್ ಹಾಗೂ ರೋಮಾಂಚಕ ಬಂಪರ್ ರೈಡ್‌ನಂತಹ ಚಟುವಟಿಕೆಗಳು ಲಭ್ಯವಿವೆ. ಇದರ ಸೊಬಗಿಗೆ ಮತ್ತಷ್ಟು ಮೆರುಗು ನೀಡುವಂತೆ ಕರ್ನಾಟಕದ ಮೊದಲ ತೇಲುವ ಸೇತುವೆ ಇಲ್ಲಿನ ವಿಶಿಷ್ಟ ಆಕರ್ಷಣೆಯಾಗಿದ್ದು, ಪ್ರವಾಸಿಗರು ಸಮುದ್ರದ ಒಳಗೆ ನಡೆದು ಅಲೆಗಳ ಅನುಭವವನ್ನು ಹತ್ತಿರದಿಂದ ಆಸ್ವಾದಿಸಲು ಅವಕಾಶ ಕಲ್ಪಿಸುತ್ತದೆ.
ಆಹಾರಪ್ರಿಯರಿಗಾಗಿ ಕಡಲತೀರದ ಮಳಿಗೆಗಳಲ್ಲಿ ರುಚಿಕರವಾದ ತಾಜಾ ಸಮುದ್ರಾಹಾರ ಹಾಗೂ ಸ್ಥಳೀಯ ಖಾದ್ಯಗಳು ಲಭ್ಯವಿದ್ದು, ಕರಾವಳಿಯ ನೈಜ ಸ್ವಾದವನ್ನು ನೀಡುತ್ತವೆ. ಮನರಂಜನೆಯಷ್ಟೇ ಅಲ್ಲದೆ, ಮಲ್ಪೆ ಕಡಲತೀರವು ಮಹತ್ತರವಾದ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿದೆ; ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಇಲ್ಲಿ ವಿಸರ್ಜಿಸಲಾಗಿದ್ದು, ಅವರ ಉದಾತ್ತ ಪರಂಪರೆಯನ್ನು ಇದು ಸ್ಮರಿಸುತ್ತದೆ.
ಉತ್ಸಾಹ ಮತ್ತು ವಿಶ್ರಾಂತಿಯ ಪರಿಪೂರ್ಣ ಸಮನ್ವಯವನ್ನು ಹೊಂದಿರುವ ಮಲ್ಪೆ ಕಡಲತೀರವು, ಕರ್ನಾಟಕದ ರಮಣೀಯ ಕರಾವಳಿಯನ್ನು ಅನ್ವೇಷಿಸುವ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ತಾಣವಾಗಿದೆ.






