
ಒಂದು ದಿನದ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ
1. ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿ ಸೂರ್ಯೋದಯ
ಭಾರತದ ಅತ್ಯಂತ ಪೂಜ್ಯ ಯಾತ್ರಾಸ್ಥಳಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವಾಲಯದ ಪವಿತ್ರ ಚೈತನ್ಯದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಇದರ ಸೂಕ್ಷ್ಮ ವಾಸ್ತುಶಿಲ್ಪ ಮತ್ತು ಪ್ರಶಾಂತ ಪರಿಸರ ನಿಮ್ಮ ಪಯಣಕ್ಕೆ ಆಧ್ಯಾತ್ಮಿಕ ಆರಂಭ ನೀಡುತ್ತವೆ. ಭಕ್ತರು ಶ್ರೀಕೃಷ್ಣನ ದರ್ಶನ ಪಡೆಯುವ ಪುಟ್ಟ ಕಿಟಕಿಯಾದ ವಿಶಿಷ್ಟ ಕನಕನ ಕಿಂಡಿಯನ್ನು ನೋಡಲು ಮರೆಯಬೇಡಿ.
2. ಮಲ್ಪೆ ಕಡಲತೀರದಲ್ಲಿ ಬೆಳಗಿನ ಸಾಹಸ
ಭಕ್ತಿಪೂರ್ಣ ಆರಂಭದ ನಂತರ ಸಾಹಸ ಪ್ರಿಯರು ಮತ್ತು ಕಡಲತೀರ ಪ್ರೇಮಿಗಳ ಸ್ವರ್ಗವಾದ ಮಲ್ಪೆ ಕಡಲತೀರಕ್ಕೆ ತೆರಳಿ. ಪ್ಯಾರಾಸೇಲಿಂಗ್, ಸ್ಪೀಡ್ ಬೋಟಿಂಗ್ ಅಥವಾ ಜೆಟ್ ಸ್ಕೀಯಿಂಗ್ನಂತಹ ಜಲಕ್ರೀಡೆಗಳನ್ನು ಆನಂದಿಸಿ. ವಿಶ್ರಾಂತಿ ಬಯಸಿದರೆ, ಈ ಚಿನ್ನದ ಮರಳಿನ ಕಡಲತೀರದ ನಿರ್ಮಲ ಸೌಂದರ್ಯದಲ್ಲಿ ಮಿಂದೇಳಿ.
3. ಸೇಂಟ್ ಮೇರಿಸ್ ದ್ವೀಪಗಳಿಗೆ ಮಧ್ಯಾಹ್ನಪೂರ್ವ ವಿಹಾರ
ಮಲ್ಪೆಯಿಂದ ಕಿರು ದೋಣಿ ಪಯಣದ ಮೂಲಕ ವಿಶಿಷ್ಟ ಷಡ್ಭುಜಾಕಾರದ ಬಸಾಲ್ಟ್ ಶಿಲಾರಚನೆಗಳಿಗೆ ಪ್ರಸಿದ್ಧವಾದ ಮನಮೋಹಕ ಸೇಂಟ್ ಮೇರಿಸ್ ದ್ವೀಪಗಳಿಗೆ ತೆರಳಿ. ಪ್ರಶಾಂತ ನೀಲಿ-ಹಸಿರು ನೀರು ಮತ್ತು ಇನ್ಸ್ಟಾಗ್ರಾಂಗೆ ಹೇಳಿ ಮಾಡಿಸಿದಂತಹ ಭೂದೃಶ್ಯಗಳಿರುವ ಈ ಪುಟ್ಟ ದ್ವೀಪಗಳನ್ನು ಅನ್ವೇಷಿಸಿ.
4. ಹಸ್ತಶಿಲ್ಪ ಪಾರಂಪರಿಕ ಗ್ರಾಮ ವಸ್ತುಸಂಗ್ರಹಾಲಯದಲ್ಲಿ ಸಾಂಸ್ಕೃತಿಕ ಮುಳುಗು
ಮಧ್ಯಾಹ್ನದ ಊಟದ ನಂತರ ಹಸ್ತಶಿಲ್ಪ ಪಾರಂಪರಿಕ ಗ್ರಾಮ ವಸ್ತುಸಂಗ್ರಹಾಲಯದ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ತಲ್ಲೀನರಾಗಿ. ಕರಾವಳಿ ಕರ್ನಾಟಕದ ಶ್ರೀಮಂತ ಪರಂಪರೆಯ ಕಥೆ ಹೇಳುವ, ಅತ್ಯಂತ ಕಾಳಜಿಯಿಂದ ಪುನರುಜ್ಜೀವನಗೊಳಿಸಿದ ಸಾಂಪ್ರದಾಯಿಕ ಮರದ ಮನೆಗಳು, ಶಿಲ್ಪಗಳು ಮತ್ತು ಕಲಾಕೃತಿಗಳನ್ನು ಕಂಡು ಬೆರಗಾಗಿ.
5. ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಕಡಲತೀರದಲ್ಲಿ ಸಂಜೆಯ ಸಂತಸ
ದಿನ ಮುಗಿಯುತ್ತಿದ್ದಂತೆ ಪರಿಸರಸ್ನೇಹಿ ಮತ್ತು ನಿರ್ಮಲ ಪರಿಸರಕ್ಕೆ ಹೆಸರಾದ ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಕಡಲತೀರಕ್ಕೆ ಭೇಟಿ ನೀಡಿ. ನಿರಾಳವಾಗಿ ಅಡ್ಡಾಡಿ, ಮೃದುವಾದ ಕಡಲ ತಂಗಾಳಿಯನ್ನು ಅನುಭವಿಸಿ ಮತ್ತು ಮನಮೋಹಕ ಸೂರ್ಯಾಸ್ತದ ದೃಶ್ಯಗಳನ್ನು ಸೆರೆಹಿಡಿಯಿರಿ.
6. ಕಾಪು ಕಡಲತೀರ ಮತ್ತು ದೀಪಸ್ತಂಭದಲ್ಲಿ ಸೂರ್ಯಾಸ್ತದ ಪ್ರಶಾಂತತೆ
ಅರಬ್ಬೀ ಸಮುದ್ರದ ವಿಹಂಗಮ ನೋಟ ನೀಡುವ ಐತಿಹಾಸಿಕ ದೀಪಸ್ತಂಭಕ್ಕೆ ಪ್ರಸಿದ್ಧವಾದ ಕಾಪು ಕಡಲತೀರದಲ್ಲಿ ನಿಮ್ಮ ದಿನವನ್ನು ಮುಕ್ತಾಯಗೊಳಿಸಿ. ಸ್ಮರಣೀಯ ಸೂರ್ಯಾಸ್ತದ ಅನುಭವಕ್ಕಾಗಿ ದೀಪಸ್ತಂಭವನ್ನೇರಿ, ಪ್ರಶಾಂತ ವಾತಾವರಣ ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸಲಿ.
ಆಧ್ಯಾತ್ಮಿಕತೆ, ಸಾಹಸ, ಸಾಂಸ್ಕೃತಿಕ ಅನ್ವೇಷಣೆ ಮತ್ತು ವಿಶ್ರಾಂತಿಯ ಪರಿಪೂರ್ಣ ಸಂಗಮವಾದ ಈ ಪ್ರವಾಸ ಯೋಜನೆ, ಉಡುಪಿ ಜಿಲ್ಲೆಯಲ್ಲಿ ನಿಮ್ಮ ದಿನವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ.